Wednesday, July 19, 2017

ಶ್ರೀ ಮುಕ್ತೇಶ್ವರಸ್ವಾಮಿ ದೇವಾಲಯ, ಚೌಡಯ್ಯದಾನಪುರ

ಶ್ರೀ  ಮುಕ್ತೇಶ್ವರಸ್ವಾಮಿ ದೇವಾಲಯ, ಚೌಡಯ್ಯದಾನಪುರ
ಶ್ರೀ  ಮುಕ್ತೇಶ್ವರಸ್ವಾಮಿ ದೇವಾಲಯ, ಚೌಡಯ್ಯದಾನಪುರ
ರಾಷ್ಟ್ರೀಯ ಹೆದ್ಧಾರಿ ರಲ್ಲಿ ಪಯಣಿಸುತ್ತಿದ್ದಾಗ ರಾಣಿಬೆನ್ನೂರಿನ ಕ್ರಾಸ್ ತಲುಪುತ್ತಿದ್ದಂತೆ ಇಲ್ಲೇ ಹತ್ತಿರದಲ್ಲಿ ಚೌಡದಾನ್ನಯ್ಯಪುರವೆಂಬ ಚಿಕ್ಕ ಹಳ್ಳಿಯಿದೆ ಎಂಬ ವಿಷಯವು ನೆನಪಾಯಿತು. ಬಹಳ ದಿವಸಗಳಿಂದ ಚೌಡಯ್ಯದಾನಪುರದ ಅತಿ  ಸುಂದರವಾದ ಮುಕ್ತೇಶ್ವರನ ದೇವಾಲಯವನ್ನು ನೋಡುವ ಕುತೂಹಲವಿತ್ತು. ಸ್ಥಳೀಯರೊಂದಿಗೆ ವಿಚಾರಿಸಿದಾಗ, ದೇವಾಲಯದ ಹೆಸರಿನ  ಉಚ್ಚಾರಣೆಗೆ ಸಂಬಂಧಿಸಿದಂತೆ ಬಹಳಷ್ಟು ಗೊಂದಲ ತೋರುತಿತ್ತು. ಕೊನೆಯಲ್ಲಿ ಜೀಪ್ ಚಾಲಕರೊಬ್ಬರು ನಮ್ಮ ನೆರವಿಗೆ ಬಂದರು. ನಮ್ಮ ಉಚ್ಚಾರಣೆಯೇ ಸರಿಯಲ್ಲವೆಂದು, ಅದು ಚೌಡದಾನಪುರವಲ್ಲದೆ  ಚೌಡಯ್ಯದಾನಪುರವೆಂದು ಸ್ಥಳೀಯರಲ್ಲಿ ಪ್ರಚಲಿತವಾಗಿದೆಯೆಂದು ತಿಳಿಸಿದರು. ಅವರು ಹೇಳಿದ ಮಾರ್ಗವನ್ನು ಅನುಸರಿಸಿ ತುಂಗಭದ್ರ ನದಿಯ ದಡದಲ್ಲಿರುವ ಚೌಡಯ್ಯದಾನಪುರವನ್ನು ತಲುಪಿದೆವು. ಚೌಡಯ್ಯದಾನಪುರವು ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನಲ್ಲಿದ್ದು, ಶಿವಪುರ, ಮುಕ್ತಿಕ್ಷೇತ್ರ, ಹಾಗು ಗೋಪೇ ಎಂಬ ವಿವಿಧ ಹೆಸರುಗಳಿಂದ ಕರೆಯಲ್ಪಟ್ಟಿದೆ. ಹನ್ನೆರಡನೆಯ ಶತಮಾನದಲ್ಲಿ ವೀರಶೈವ ಸಂತರಾಗಿದ್ದ ಶರಣ ಅಂಬಿಗರ ಚೌಡಯ್ಯರು ಇಲ್ಲಿ ವಾಸವಾಗಿದ್ದ ಕಾರಣದಿಂದ ಸ್ಥಳಕ್ಕೆ ಚೌಡಯ್ಯದಾನಪುರವೆಂಬ ಹೆಸರು ಬಂದಿದೆ. ಮೂಲಗಳ ಪ್ರಕಾರ ತುಂಗಭದ್ರ ನದಿಯ ದಡದಲ್ಲಿರುವ  ಮಂಟಪವೊಂದರಲ್ಲಿ ಶರಣ ಅಂಬಿಗರ ಚೌಡಯ್ಯರ ಗದ್ದುಗೆಯು ಕಂಡುಬರುತ್ತದೆ
ಶರಣ ಅಂಬಿಗರ ಚೌಡಯ್ಯರ ಗದ್ದುಗೆ
ಶರಣ ಅಂಬಿಗರ ಚೌಡಯ್ಯರ ಗದ್ದುಗೆ
ಮುಕ್ತೇಶ್ವರನ ದೇವಾಲಯವು ೧೨ನೇ ಶತಮಾನದಲ್ಲಿ ಚಾಲುಕ್ಯರಿಂದ ನಿರ್ಮಿಸಲ್ಪಟ್ಟಿತು. ದಂತಕಥೆಯ ಪ್ರಕಾರ, ದೇವಾಲಯವು ತುಂಗಭದ್ರ ನದಿಯು ಹರಿಯುವ ದಿಕ್ಕನ್ನು ಬದಲಾಯಿಸುವ ಸ್ಥಾನದಲ್ಲಿ ನೆಲೆಗೊಂಡಿದ್ದು, ಹೊಸ ಪಥದ ಪ್ರಾರಂಭದ  ಸೂಚನೆಯಾಗಿದೆ  ಹಾಗು ಮುಕ್ತಿಯ/ಮೋಕ್ಷದ ಸಂಕೇತವೂ ಆಗಿರುವುದರಿಂದ, ಸ್ಥಳಕ್ಕೆ ಮುಕ್ತಿಕ್ಷೇತ್ರವೆಂದೂ ಕರೆಯಲಾಗುತ್ತದೆ.  ಇಲ್ಲಿ ಮುಕ್ತೇಶ್ವರಸ್ವಾಮಿಯನ್ನು (ಮುಕ್ತಿಯನ್ನು ನೀಡುವ ದೇವರನ್ನುಪೂಜಿಸುತ್ತಾರೆ. ಸಾಮಾನ್ಯವಾಗಿ ನೋಡಿದರೆ, ನಮ್ಮ ಪೂರ್ವಜರು ದೇವಾಲಯಗಳನ್ನು ನಿರ್ಮಿಸಲು ನದಿಯ ದಡಕ್ಕೆ  ಸಮೀಪದಲ್ಲಿರುವ  ಸ್ಥಳಗಳನ್ನು ಅಥವಾ ಬೆಟ್ಟದ ಶಿಖರಗಳನ್ನು ಪವಿತ್ರ ಮತ್ತು ಸರಿಯಾದ ಜಾಗವೆಂದು ಪರಿಗಣಿಸುತ್ತಿದ್ದರು.
ಶ್ರೀ  ಮುಕ್ತೇಶ್ವರಸ್ವಾಮಿ ದೇವಾಲಯ
ಶ್ರೀ ಮಹೇಶ್ವರ ದೇವರು
ಸುಖನಾಸಿಯ ಬಾಗಿಲಿನ ಚೌಕಟ್ಟು ಹಾಗು ಲಲಾಟ
ಸ್ಥಳದಲ್ಲಿ ಎಂಟು ಪ್ರಮುಖ ಶಾಸನಗಳು ಕಂಡುಬಂದಿವೆ. ಉಲ್ಲೇಖನದ ಪ್ರಕಾರ ಒಂದು ಶಾಸನವು ಹೀಗೆ ಹೇಳುತ್ತದೆ, "ಇಸವಿ ೧೧೯೧ರಲ್ಲಿ ಮುಕ್ತಾಜಿಯಾರ್ ಎಂಬ ಹೆಸರಿನ ಸಂತರೊಬ್ಬರು ಸ್ಥಳಕ್ಕೆ ಆಗಮಿಸಿ, ಮುಕ್ತಿನಾಥಸ್ವಾಮಿಯನ್ನು  ಸಂತುಷ್ಟಗೊಳಿಸಲು ಕಠಿಣವಾದ ಆಚರಣೆಗಳನ್ನು ನಿರ್ವಹಿಸಿದರು. ಹೀಗಾಗಿ, ಇಲ್ಲಿಯ  ದೇವರನ್ನು ಮುಕ್ತೇಶನೆಂದು ಕರೆಯುತ್ತಾರೆ. ಮುಂದೆ, ಅವರು ತಮ್ಮ ಶಿಷ್ಯರಿಗೆ ಮುಕ್ತಿಯನ್ನು ದಯಪಾಲಿಸುವುದರಿಂದ ಮುಕ್ತೇಶ್ವರಸ್ವಾಮಿ ಎಂಬುದು ಬಹಳ ಸೂಕ್ತವಾದ ಹೆಸರಾಗಿತ್ತು."ದೇವಾಲಯದ ಸಂಕೀರ್ಣವು ಮುಕ್ತೇಶ್ವರಸ್ವಾಮಿಯ ಮುಖ್ಯ ದೇವಸ್ಥಾನವನ್ನು, ಕಲ್ಲಿದೇವನ ದೇವಸ್ಥಾನವನ್ನು, ಎರಡು ಸಣ್ಣ ಶಿವನ ದೇವಾಲಯಗಳನ್ನು ಹಾಗು ನಾಲ್ಕು ವಿಭಾಗಗಳನ್ನು ಹೊಂದಿರುವ ದೇವಸ್ಥಾನವೊಂದನ್ನು (ಎರಡು ಭಾಗಗಳನ್ನು ಶಿವದೇವನಿಗೆ, ಒಂದನ್ನು ವೀರಭದ್ರಸ್ವಾಮಿಗೆ ಹಾಗು ಮತ್ತೊಂದನ್ನು ಚಾಮುಂಡಿ ದೇವಿಗೆ ಸಮರ್ಪಿಸಲಾಗಿದೆಒಳಗೊಂಡಿದೆ. ಸಂಕೀರ್ಣದ ಪ್ರವೇಶದ್ವಾರದಲ್ಲಿ ಸುಮಾರು ೩೦ ಅಡಿ  ಎತ್ತರದ ಸ್ತಂಭವು  ನಿಂತಿದೆ. ದೇವಾಲಯದ ಸಂಕೀರ್ಣದಲ್ಲಿ ಸಂತ ಶಿವದೇವರ ಗದ್ದುಗೆಯೂ ಕಾಣಿಸುತ್ತದೆ. ಇಡೀ ದೇವಾಲಯವನ್ನು ಬಹಳ ಚೆನ್ನಾಗಿ ನಿರ್ವಹಿಸಲಾಗುತ್ತಿದೆ.  
ಶಾಸನಗಳು
ಸಂತ ಶಿವದೇವರ ಗದ್ದುಗೆ
ವೀರಭದ್ರಸ್ವಾಮಿ, ಶಿವದೇವ ಹಾಗು ಚಾಮುಂಡಿ ದೇವಿಯ ದೇವಾಲಯಗಳು 
ಕಲ್ಲಿದೇವ ಹಾಗು ಎರಡು ಸಣ್ಣ ಶಿವನ ದೇವಾಲಯಗಳು 
ಮುಕ್ತೇಶ್ವರನ ದೇವಾಲಯವು ದ್ವಿಕೂಟ ದೇವಾಲಯವಾಗಗಿದ್ದು, ಎರಡು ಗರ್ಭಗೃಹಗಳನ್ನು ಹೊಂದಿದೆ. ದೇವಾಲಯವು ಚಾಲುಕ್ಯರ ಯುಗದ ಶೈಲಿ, ಸಂಸ್ಕೃತಿ, ಹಾಗು ವಾಸ್ತುಶಿಲ್ಪವನ್ನು ಚಿತ್ರಿಸುವ ಮೇರುಕೃತಿಯಾಗಿದೆ. ಜಕಣಾಚಾರಿ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿರುವ ದೇವಾಲಯಕ್ಕೆ ಪೂರ್ವಾಭಿಮುಖ ಹಾಗು ದಕ್ಷಿಣಾಭಿಮುಖಗಳಲ್ಲಿ ಎರಡು ಪ್ರವೇಶದ್ವಾರಗಳಿವೆ. ಎರಡೂ ಪ್ರವೇಶದ್ವಾರಗಳು ಸುಂದರವಾದ ಮುಖಮಂಟಪಗಳನ್ನು ಹೊಂದಿದೆ. ಬಾಗಿಲಿನ ಚೌಕಟ್ಟುಗಳು ಅಲಂಕಾರಿಕವಾಗಿ ಹಾಗು ಅತಿಶ್ರೇಷ್ಠವಾಗಿದ್ದು, ಕಲ್ಯಾಣ ಚಾಲುಕ್ಯರ ವಾಸ್ತುಶಿಲ್ಪವನ್ನು ವರ್ಣಿಸುತ್ತದೆ. ಮುಖ್ಯದ್ವಾರಗಳ  ಬಾಗಿಲುಗಳ ಲಲಾಟದಲ್ಲಿ ಮಹೇಶ್ವರಸ್ವಾಮಿಯ ಉಬ್ಬುಶಿಲ್ಪಗಳಿವೆ. ಗರ್ಭಗೃಹದಲ್ಲಿ ಸಣ್ಣ ಶಿವಲಿಂಗವಿದೆ. ಸುಖನಾಸಿಯ ಬಾಗಿಲ ಚೌಕಟ್ಟು ಸಹ ಬಹಳ ನೈಪುಣ್ಯತೆಯಿಂದ ನಿರ್ವಹಿಸಲಾಗಿದೆ. ಪೂರ್ವದಲ್ಲಿರುವ ಪ್ರವೇಶದ್ವಾರದ ಎದುರು ಮಂಟಪವಿದೆ. ದೇವಾಲಯದ ಹೊರಗೋಡೆಗಳು ಶಿವನ, ಗಣೇಶನ, ಸರಸ್ವತಿಯ, ಕೃಷ್ಣನ, ಸೂರ್ಯನ, ಹಾಗು ಇತರ ದೇವ ದೇವತೆಗಳ ಕೆತ್ತನೆಗಳನ್ನು ಹೊಂದಿವೆ. ಹೊರಗಿನ ಗೋಡೆಯ ಮೇಲಿನ ಕಲಾತ್ಮಕ ರಚನೆಯು ಶ್ಲಾಘನೀಯವಾದುದು. ಅರ್ಚಕರ ಗೈರುಹಾಜರಿಯಲ್ಲಿಯೂ ದೇವಾಲಯದ ಬಾಗಿಲು ದಿನವಿಡೀ ತೆರೆದಿರುತ್ತದೆ. ನಿಸ್ಸಂಶಯವಾಗಿ, ದೇವಾಲಯವನ್ನು ಒಳ್ಳೆಯ ನಿರ್ವಹಣೆಯುಳ್ಳ ದೇವಾಲಯಗಳಲ್ಲೊಂದೆಂದು ಪರಿಗಣಿಸಬಹುದು.

ದೇವಾಲಯದ ಶಿಖರ
ದೇವಕೋಷ್ಟ
ಲೇಖನದ ಸಂಪಾದನೆಯಲ್ಲಿ ನಮಗೆ ಸಹಾಯ ಮಾಡಿದ ಶ್ರೀ ರಂಜಿತ್ ಅಡಿಗರವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ನೀಡಲು ಬಯಸುತ್ತೇವೆ.  
To read this article of "Sri Muktesvara Temple, Chaudayyadanapura" in English, click here.

No comments:

Post a Comment